ಪಶ್ಚಿಮ ಆಫ್ರಿಕದಲ್ಲಿ ಗಿನಿ ಖಾರಿಯ ಮೇಲಿರುವ ಒಂದು ಗಣರಾಜ್ಯ. ಉ. ಅ. 40 45' ಮತ್ತು 110 10', ಪು.ರೇ. 10 12' ಮತ್ತು 30 15' ನಡುವೆ ಇದೆ. ಪುರ್ವ, ಉತ್ತರ, ಪಶ್ಚಿಮಗಳಲ್ಲಿ ಟೋಗೋ, ಉತ್ತರ ವೋಲ್ಟ ಮತ್ತು ಐವರಿ ಕೋಸ್ಟ್ ರಾಜ್ಯಗಳೂ ದಕ್ಷಿಣದಲ್ಲಿ ಗಿನಿ ಖರಿಯೂ ಇವೆ. ವಿಸ್ತೀರ್ಣ 238535 ಚ.ಕಿಮೀ. ಜನಸಂಖ್ಯೆ 24, 233, 431(2010) ಮತ್ತು ಅಕ್ರಾ ರಾಜಧಾನಿ ಅಕ್ರಾ ಅತಿ ದೊಡ್ಡ ನಗರ.

ಭೌತಲಕ್ಷಣ : ಘಾನ ರಾಜ್ಯ ಬಹುತೇಕ ತಗ್ಗು ಪ್ರದೇಶ. ನೈಋತ್ಯ, ವಾಯವ್ಯ ಮತ್ತು ಅತ್ಯಂತ ಉತ್ತರ ಭಾಗಗಳಲ್ಲಿ 305 ಮೀ ಎತ್ತರದ ನಗ್ನೀಕೃತ ಬಂiÀÄಲುಗಳಿವೆ. ಇವುಗಳ ಅಂಚಿನ ನೆಲ 610 ಮೀ ವರೆಗೂ ಎತ್ತರವಾಗಿರುವುದುಂಟು. ಘಾನ ರಾಜ್ಯದ ಮಧ್ಯದಲ್ಲಿ ವೋಲ್ಟ ನದಿಯ ಕಣಿವೆಯ ವಿಶಾಲ ಪ್ರದೇಶ ಸಾಮಾನ್ಯವಾಗಿ 152 ಮೀ ಗಿಂತ ಎತ್ತರವಾಗಿಲ್ಲ. ಆದರೆ ಈ ಕಣಿವೆಯ ತುದಿಗಳಲ್ಲಿರುವ ಕ್ವಾಹು ಮತ್ತು ಗಂಬಾಗ ಪ್ರಸ್ಥಭೂಮಿಗಳ ಎತ್ತರ 457-533 ಮೀ ಆಗ್ನೇಯ ಭಾಗದಲ್ಲಿರುವ ಅಣ್ವಪಿಂ-ಟೋಗೋ ಶ್ರೇಣಿಗಳ ಸರಾಸರಿ ಎತ್ತರ 457 ಮೀ ಘಾನದ ಅತ್ಯುನ್ನತ ಶಿಖರಗಳಾದ ಅಫಾಡ್ಜಾಟೊ 885 ಮೀ ಮತ್ತು ಡ್ಜೆಬೋಬೊ 875 ಮೀ ಇಲ್ಲಿವೆ. ಕರಾವಳಿ ಸಮತಟ್ಟಾಗಿದೆ, ಮರಳಿನಿಂದಲೂ ಲಗೂನುಗಳಿಂದಲೂ ಕೂಡಿದೆ. ಘಾನಕ್ಕೆ 537 ಕಿಮೀ ಉದ್ದದ ಸಮುದ್ರತೀರವುಂಟು. ವೋಲ್ಟ, ಪ್ರಾ ಆಂಕೋಬ್ರ, ಟಾನೊ ಇವು ಘಾನದ ನದಿಗಳು.

ವಾಯುಗುಣ : ಘಾನದ್ದು ಉಷ್ಣವಲಯದ ವಾಯುಗುಣ. ಈಶಾನ್ಯದಲ್ಲಿ ಸಹಾರ ಮರುಭೂಮಿಯ ಕಡೆಯಿಂದ ದೂಳುತುಂಬಿದ ಉಷ್ಣ ಶುಷ್ಕ ಮಾರುತವೂ ನೈಋತ್ಯದಲ್ಲಿ ಅಟ್ಲಾಂಟಿಕ್ ಸಾಗರದಿಂದ ತೇವಗೂಡಿದ ಮಾನ್ಸೂನ್ ಮಾರುತವೂ ಘಾನದ ಮೇಲೆ ಬೀಸುತ್ತವೆ. ಇವೆರಡೂ ಕೂಡುವೆಡೆಯಲ್ಲಿ ಗುಡುಗಿನಿಂದ ಕೂಡಿದ ಬಿರುಗಾಳಿ ಸಂಭವಿಸುತ್ತದೆ. ಸೂರ್ಯನ ಚಲನೆಗೆ ಅನುಗುಣವಾಗಿ ಋತುಗಳು ವ್ಯತ್ಯಾಸವಾಗುತ್ತವೆ. ಶುಷ್ಕಮಾರುತ ಬೀಸುವೆಡೆಯಲ್ಲಿ ಮಳೆಯಿಲ್ಲ. ಉತ್ತರದಲ್ಲಿ ಮಳೆ ಕಡಿಮೆ. ದಕ್ಷಿಣದಲ್ಲಿ ಪಶ್ಚಿಮದ ಕಡೆ ಹೆಚ್ಚು ಮಳೆಯಾಗುತ್ತದೆ. ಗರಿಷ್ಠ ಮಳೆ 86". ವಾಯುಗುಣ ಮಳೆಯಷ್ಟು ವ್ಯತ್ಯಾಸವಾಗುವುದಿಲ್ಲ. 79º ಫ್ಯಾ. - 84º ಫ್ಯಾ. (26ಲಿ ಸೆಂ. - 29ಲಿ ಸೆಂ) ಸರಾಸರಿ ಉಷ್ಣತೆ. ಎತ್ತರ ಹಾಗೂ ಸಮುದ್ರ ಪ್ರಭಾವಗಳಿರುವಡೆ ಉಷ್ಣತೆ ಕಡಿಮೆ.

ಸಸ್ಯ ಪ್ರಾಣಿಜೀವನ : ದಕ್ಷಿಣದಲ್ಲಿ ಅರಣ್ಯವೂ ಉತ್ತರದಲ್ಲಿ ಸವಾನವೂ ಸ್ವಾಭಾವಿಕ. ಪರಿನಿಯತ ಮೀಸಲು ಕಾಡುಗಳಿರುವೆಡೆಯನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕಾಡುಗಳನ್ನು ಕಡಿದು ಕೋಕೋ ಮರಗಳನ್ನು ನೆಡಲಾಗಿದೆ; ಬಾಳೆ, ಎಣ್ಣೆಯ ತಾಳೆ, ಮುಸುಕಿನ ಜೋಳ ಬೆಳೆಯಲಾಗುತ್ತಿದೆ. ನೆಲ ಫಲವತ್ತಾಗಿಲ್ಲದ ಪ್ರದೇಶಗಳಲ್ಲಿ ಮರಗೆಣಸನ್ನೂ, ಹಳ್ಳಿಗಳ ಸುತ್ತ ಜಂಬೀರ ವೃಕ್ಷಗಳನ್ನೂ ಬೆಳೆಯುತ್ತಾರೆ. ಹೆಚ್ಚು ಮಳೆ ಬೀಳದ ಕರಾವಳಿ ಪ್ರದೇಶದಲ್ಲಿ ಕುರುಚಲುಗಿಡ ವಿಶೇಷ.
ಸಿಂಹ, ಚಿರತೆ, ಕಿರುಬ, ಜಿಂಕೆ, ಆನೆ, ಕಾಡೆಮ್ಮೆ, ಕಾಡುನಾಯಿ, ಚಿಂಪಾಜಿ, ಕೋತಿ, ಹೆಬ್ಬಾವು, ನಾಗರಹಾವು, ಆ್ಯಡರ್ ಸರ್ಪ - ಇವು ಇಲ್ಲಿಯ ಕೆಲವು ಪ್ರಾಣಿಗಳು. ನದಿಗಳಲ್ಲೂ ನೀರು ನಿಂತ ಸ್ಥಳಗಳಲ್ಲೂ ಮೊಸಳೆಗಳುಂಟು. ವೋಲ್ಟ ನದಿಯಲ್ಲಿ ನೀರಾನೆಗಳಿವೆ. ವಿವಿಧ ವರ್ಗಗಳ ಹಲ್ಲಿಗಳು, ಆಮೆ, ದೊಡ್ಡ ಆಕಾರದ ಬಸವನ ಹುಳು - ಇವೂ ಸಾಮಾನ್ಯ. ಗಿಳಿ, ಕೊಂಬುಕೊಕ್ಕಿನ ಹಕ್ಕಿ, ಮೀಂಚುಳ್ಳಿ, ಹದ್ದು, ಗಿಡುಗ, ಕ್ರೌಂಚ, ಕೋಗಿಲೆ, ಗೋಟ್ಸಕರ್, ಕದಿರುಗಿಣಿ, ಪಾರಿವಾಳ ಮುಂತಾದ ಹಲವು ಬಗೆಯ ಪಕ್ಷಿಗಳಿವೆ. ಹಲವು ಜಾತಿಗಳ ಮೀನುಗಳೂ ನದೀಮುಖಗಳಲ್ಲಿ ಷಾರ್ಕ್ಗಳೂ ಉಂಟು. ಜೇಡ, ಚೇಳು, ಇರುವೆ, ಗೆದ್ದಲು, ಚಿಟ್ಟೆ, ಮಿಡತೆ, ಸೊಳ್ಳೆ, ಟ್ಸೆಟ್ಸೆ ನೊಣ - ಇವೆಲ್ಲ ಧಾರಾಳವಾಗಿವೆ.
	      				 (ವಿ.ಜಿ.ಕೆ)
ಇತಿಹಾಸ : 1471ರಲ್ಲಿ ಪೋರ್ಚುಗೀಸ್ ವ್ಯಾಪಾರಿಗಳು ಚಿನ್ನ, ದಂತ, ಮತ್ತು ಸಂಬಾರ ದಿನಸಿಗಳಿಗಾಗಿ ಇಲ್ಲಿಗೆ ಬಂದಮೇಲೆ ಘಾನದ ಆಧುನಿಕ ಇತಿಹಾಸ ಪ್ರಾರಂಭವಾಯಿತು. ಈ ದೇಶಕ್ಕೆ ಘಾನ ಎಂಬ ಹೆಸರು ಬಂದದ್ದು ಇದಕ್ಕೆ ಸ್ವಾತಂತ್ರ್ಯ ಬಂದಮೇಲೆ. 4-13 ನೆಯ ಶತಮಾನಗಳಲ್ಲಿ ನೈಜರ್ ನದೀ ಬಂiÀÄಲಿನಲ್ಲಿ ಪ್ರಸಿದ್ಧವಾಗಿದ್ದ ಘಾನ ಸಾಮ್ರಾಜ್ಯದಿಂದ ಇದಕ್ಕೆ ಘಾನ—ಎಂದರೆ ರಾಜಯೋಧ ಹೆಸರು ಬಂದಿದೆ. ಪೋರ್ಚುಗೀಸರು 1482 ರಲ್ಲಿ ಸಮುದ್ರದಂಚಿನಲ್ಲಿ ಎಲ್ಮಿನ ದುರ್ಗವನ್ನು ಕಟ್ಟಿದರು. ಅವರ ತರುವಾಯ ಸ್ವೀಡನ್, ಡೆನ್ಮಾರ್ಕ್, ಪ್ರಷ್ಯ ದೇಶಗಳ ಜನರೂ ಬ್ರಿಟಿಷರೂ ಬಂದರು. ಬಂಗಾರದ ವ್ಯಾಪಾರ ಮಾಡುತ್ತಿದ್ದ ಪೋರ್ಚುಗೀಸರು ಕ್ರಮೇಣ ಗುಲಾಮ ವ್ಯಾಪಾರವನ್ನಾರಂಭಿಸಿ ಇಲ್ಲಿಂದ ಜನರನ್ನು ಬಲಾತ್ಕಾರವಾಗಿ ಸಾಗಿಸತೊಡಗಿದರು. 1807ರಲ್ಲಿ ಬ್ರಿಟಿಷರು ಗುಲಾಮ ವ್ಯಾಪಾರವನ್ನು ವಿರೋಧಿಸಿದರು. 19ನೆಯ ಶತಮಾನದಲ್ಲಿ ಇಲ್ಲಿ ಬ್ರಿಟಿಷರ ಬಲ ಹೆಚ್ಚಿ ಯೂರೋಪಿನ ಇತರ ದೇಶಗಳ ಪ್ರಭಾವ ಕುಗ್ಗಿತು. ಅಶಾಂಟೀ ಬಣದವರು ಸಮುದ್ರತೀರದ ಬಣಗಳ ಜನರನ್ನು ಗುಲಾಮರನ್ನಾಗಿ ಮಾರಲು ಸಹಾಯಕರಾಗಿದ್ದ ಕಾರಣ ಅವರಿಗೂ ಬ್ರಿಟಿಷರಿಗೂ 1806-1902 ರ ನಡುವೆ ಏಳು ಯುದ್ಧಗಳು ನಡೆದು ಕೊನೆಗೆ ಅಲ್ಲಿಯ ಚಿನ್ನದಿಂದಾಗಿ ಗೋಲ್ಡ್ ಕೋಸ್ಟ್ ಎಂದು ಹೆಸರು ಪಡೆದಿದ್ದ ಕರಾವಳಿ ಪ್ರದೇಶ 1874ರಲ್ಲಿ ಇಂಗ್ಲೆಂಡಿನ ವಸಾಹತಾಯಿತು. 1887ರಲ್ಲಿ ಬ್ರಿಟಿಷರು ಉತ್ತರದ ತಮ್ಮ ಪ್ರದೇಶಗಳನ್ನೆಲ್ಲ ಒಂದುಗೂಡಿಸಿ ಆರಕ್ಷಿತ ಪ್ರದೇಶವನ್ನಾಗಿ ಮಾಡಿದರು. 1901ರಲ್ಲಿ ಜರ್ಮನಿಗೆ ಸೇರಿದ್ದ ಟೋಗೋಲ್ಯಾಂಡಿನ ಸ್ವಲ್ಪಭಾಗ ಒಂದನೆಯ ಮಹಾಯುದ್ಧದ ತರುವಾಯ ಬ್ರಿಟಿಷರ ನ್ಯಾಸಾಧಿಕಾರಕ್ಕೆ ಸೇರಿತು. ಗೋಲ್ಡ್ ಕೋಸ್ಟ್ನ ಒಂದು ಭಾಗವಾಗಿ ಇದರ ಆಡಳಿತ ನಡೆಸಲಾಗುತ್ತಿತ್ತು.

ಎರಡನೆಯ ಮಹಾಯುದ್ಧದ ವೇಳೆಗೆ ಘಾನ ಜನರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿತು. 1946ರಿಂದ ಸ್ಥಳೀಯ ಜನ ಆಡಳಿತದಲ್ಲಿ ಭಾಗವಹಿಸಲಾರಂಭಿಸಿದರು. ಆ ತರುವಾಯ ಸ್ವಯಮಾಡಳಿತಕ್ಕೆ ಒತ್ತಡ ಹೆಚ್ಚಿತು. ಅಶಾಂಟೀ ಪ್ರದೇಶವೂ ಸೇರಿದಂತೆ ಉತ್ತರದ ಆರಕ್ಷಿತ ಪ್ರದೇಶ ಮತ್ತು ಬ್ರಿಟಿಷರ ನ್ಯಾಸದಲ್ಲಿದ್ದ ಟೋಗೋಲ್ಯಾಂಡ್ ಇವು ಗೋಲ್ಡ್ಕೋಸ್ಟ್ ವಸಾಹತುವಿ ನೊಡನೆ 1957ರಲ್ಲಿ ವಿಲೀನ ಗೊಂಡವು. ಇದು ಸ್ವತಂತ್ರ ವಾಯಿತು. ಈ ಒಟ್ಟು ಪ್ರದೇಶಕ್ಕೆ ಘಾನ ಎಂಬ ಹೆಸರು ಬಂತು. ಆಫ್ರಿಕದ ನೀಗ್ರೋ ದೇಶಗಳ ಪೈಕಿ ಮೊಟ್ಟಮೊದಲು ಸ್ವಾತಂತ್ರ್ಯ ಪಡೆದ ರಾಜ್ಯ ಘಾನ. 1960ರ ಜುಲೈ 1 ರಂದು ಇದು ಗಣರಾಜ್ಯವಾಯಿತು.

1960-65ರ ಅವಧಿ ಯಲ್ಲಿ ನ್ಕ್ರುಮ ಘಾನದ ರಾಷ್ಟ್ರಪತಿಯಾಗಿದ್ದ. ಫೆಬ್ರುವರಿ 1966ರಲ್ಲಿ ಅವನ ಸರ್ಕಾರ ಉರುಳಿ ಸೈನಿಕ ಪ್ರಭುತ್ವ ಏರ್ಪಟ್ಟಿತು. ತರುವಾಯ 1969ರಲ್ಲಿ ಎರಡನೆಯ ಗಣರಾಜ್ಯ ಅಸ್ತಿತ್ವಕ್ಕೆ ಬಂತು. ಹೊಸ ಸಂವಿಧಾನದ ಪ್ರಕಾರ ಚುನಾವಣೆ ನಡೆಯಿತು 1ನೆಯ ಸೆಪ್ಟೆಂಬರ್ 1970ರಂದು ಎಡ್ವರ್ಡ್ ಅಕುಫೊ-ಅಡ್ಡೊ ಘಾನದ ಅಧ್ಯಕ್ಷನಾದ. 1992ರಲ್ಲಿ ಅಧ್ಯಕ್ಷೀಯ (ಪ್ರೆಸಿಡೆನ್ಷಿಯಲ್) ಹಾಗೂ ಪಾರ್ಲಿಮೆಂಟರಿ ಚುನಾವಣೆಗಳು ನಡೆದವು. 1992ರ ಸಂವಿಧಾನವು ಅಧಿಕಾರವನ್ನು ಅಧ್ಯಕ್ಷ, ಪಾರ್ಲಿಮೆಂಟ್ ಸಚಿವ ಸಂಪುಟ, ಕೌನ್ಸಿಲ್ ಆಫ್ ಸ್ಟೇಟ್ ಹಾಗೂ ಸ್ವತಂತ್ರ ನ್ಯಾಯಾಂಗಗಳ ನಡುವೆ ಹಂಚಿಕೆ ಮಾಡಿದೆ. 	(ಕೆ.ಎಸ್.ಎಸ್.)

ಆಡಳಿತ : ಘಾನದಲ್ಲಿ ಏಕಸದನೀಯ ವಿಧಾನಮಂಡಲವಿದೆ. ಅದರ ಚುನಾಯಿತರ ಸದಸ್ಯರ ಸಂಖ್ಯೆ 140. ಐದು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ. ಆಡಳಿತ ಸೌಕರ್ಯಕ್ಕಾಗಿ ದೇಶವನ್ನು ಆಡಳಿತಾತ್ಮಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವನ್ನು 170 ಜಿಲ್ಲೆಗಳಾಗಿ ವಿಭಾಗ ಮಾಡಲಾಗಿದೆ. ನ್ಯಾಯಾಂಗ ವ್ಯವಸ್ಥೆ ಬ್ರಿಟಿಷ್ ಕಾನೂನನ್ನು ಆಧರಿಸಿದೆ. ಆಡಳಿತ ಸಮಿತಿಗಳು ಜಿಲ್ಲೆಗಳ ಆಡಳಿತ ನಡೆಸುತ್ತವೆ.       (ಎ.ಎಂ.ಆರ್.)

ಜನ: ಘಾನದ ಜನ ನೀಗ್ರೋ ಬುಡಕಟ್ಟಿಗೆ ಸೇರಿದವರು. ಇದರಲ್ಲಿ ಹಲವು ಬಣಗಳಿವೆ, ಆಕಾನ್ ಬಣದಲ್ಲಿ ಟ್ಟಿ ಮತ್ತು ಘಾಂಟಿ ಎಂದು ಎರಡು ತಂಡಗಳುಂಟು. ಟ್ವಿಗಳು ಅಶಾಂಟೀ ಮತ್ತು ಮಧ್ಯ ಘಾನದಲ್ಲಿ ವಾಸಿಸುತ್ತಾರೆ. ಘಾಂಟಿಗಳು ಸಮುದ್ರತೀರಗಳಲ್ಲಿ ನೆಲೆಸಿದ್ದಾರೆ. ವೋಲ್ಟ ನದೀಬಂiÀÄಲಿನಲ್ಲಿ ಗುಅನ್ ಬಣ ನೆಲೆಸಿದೆ. ಆ ನದಿಯ ಪುರ್ವಕ್ಕೆ ಇವಿ ಜನರಿದ್ದಾರೆ. ಈ ರಾಜ್ಯದಲ್ಲಿ 50 ಪ್ರಾಂತೀಯ ಭಾಷೆಗಳಿವೆ. ಆಡಳಿತ ಭಾಷೆ ಇಂಗ್ಲಿಷ್.

ಘಾನ ಜನರಲ್ಲಿ ಶೇ. 68.9 ಕ್ರೈಸ್ತರು, ಶೇ.15.9 ಮುಸ್ಲಿಮರು, ಉಳಿದವರು ಆಫ್ರಿಕದ ಸಾಂಪ್ರದಾಯಿಕ ಸರ್ವಚೇತನ ಪಂಥದವರು. 	(ವಿ.ಜಿ.ಕೆ.)

ಶಿಕ್ಷಣ ಪದ್ಧತಿ : ಘಾನ ಬಹಳ ವರ್ಷಗಳ ಕಾಲ ಬ್ರಿಟಿಷರ ವಸಾಹತು ರಾಜ್ಯವಾಗಿದ್ದ ಕಾರಣ ಅದರ ಶಿಕ್ಷಣ ಪದ್ಧತಿ ಭಾರತದ ಆಧುನಿಕ ಶಿಕ್ಷಣದ ಆರಂಭ ಮತ್ತು ಬೆಳೆವಣಿಗೆಯನ್ನು ಬಹುಮಟ್ಟಿಗೆ ಹೋಲುತ್ತದೆ. ಸ್ವಾತಂತ್ರ್ಯಾನಂತರ ಏಕಪ್ರಕಾರವಾಗಿ ಅಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯವನ್ನು ಪುರೈಸಲು ತೀವ್ರಗತಿಯಲ್ಲಿ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸುವುದರ ಜೊತೆಗೆ ಉತ್ತಮ ಬೋಧನೆಯನ್ನೊದಗಿಸಲು ಘಾನ ಶ್ರಮಿಸುತ್ತಿದೆ.

16ಯ ಶತಮಾನದ ಆದಿಯಲ್ಲೇ ಪೋರ್ಚುಗೀಸರು ಎಲ್ಮಿನದ ಬಳಿ ಯುರೋಪಿಯನ್ ಮಾದರಿಯ ಶಾಲೆಗಳನ್ನು ಆರಂಭಿಸಿದ್ದರು. ಆಮೇಲೆ ಮುಂದಿನ ಎರಡು ಶತಮಾನಗಳ ಅವಧಿಯಲ್ಲಿ ಬ್ರಿಟಿಷರು, ಡೇನರು ಮತ್ತು ಡಚ್ಚರು ತೀರಪ್ರದೇಶದ ತಮ್ಮತಮ್ಮ ವ್ಯಾಪಾರಕೋಠಿಗಳ ಸುತ್ತ ಅನೇಕ ಪಾಠಶಾಲೆಗಳನ್ನು ಆರಂಭಿಸಿದರು. ಹೀಗೆ ಆರಂಭವಾದ ಶಾಲೆಗಳ ಜೊತೆಗೆ 19ನೆಯ ಶತಮಾನದ ಆದಿಯಿಂದ ವೆಸ್ಲಿಯನ್ ಮೆತಾಡಿಸ್ಟ್, ಬಾಸಲ್ ಮಿಷನ್ ಮುಂತಾದ ಕ್ರೈಸ್ತಮತೀಯ ಸಂಸ್ಥೆಗಳು ನೂತನ ಶಾಲೆಗಳನ್ನು ಆರಂಭಿಸಿ, ಅಂದು ದಕ್ಷಿಣ ಗೋಲ್ಡ್ ಕೋಸ್ಟ್ ಎಂದು ಹೆಸರಾಗಿದ್ದ ಆ ಭಾಗದಲ್ಲಿ ವಿಧಾಯಕ ಶಿಕ್ಷಣಕ್ಕೆ ಹಾದಿಮಾಡಿಕೊಟ್ಟವು. ತೀರಪ್ರದೇಶವನ್ನು ಪುರ್ಣವಾಗಿ ಬ್ರಿಟಿಷರು 1874ರಲ್ಲಿ ಆಕ್ರಮಿಸಿದ ಮೇಲೆ ಅವರು ಶಿಕ್ಷಣದ ಬಗ್ಗೆ ಅಷ್ಟಾಗಿ ಆಸಕ್ತಿ ತೋರದೆ ಶಾಲೆಗಳನ್ನು ನಡೆಸುತ್ತಿದ್ದ ಮಿಷನರಿಗಳಿಗೆ ಸಹಾಯಧನವನ್ನು ಮಾತ್ರ ನೀಡುತ್ತ ಬಂದರು. ಸರ್ಕಾರ ಅಲ್ಲೊಂದು ಇಲ್ಲೊಂದು ಶಾಲೆಯನ್ನು ಮಾತ್ರ ಆರಂಭಿಸಿತ್ತು. 1900ರ ವೇಳೆಗೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಒಟ್ಟು 12,000 ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯು ತ್ತಿದ್ದರು. 1901ರ ತನಕ ಒಳನಾಡಿನ ಭಾಗಗಳನ್ನೂ ಉತ್ತರದ ಪ್ರದೇಶ ಗಳನ್ನೂ ಅವರು ಆಕ್ರಮಿ ಸಿರಲಿಲ್ಲವಾದ್ದರಿಂದ ಶಾಲಾಸೌಲಭ್ಯ ತೀರ ಪ್ರದೇಶಕ್ಕೆ ಮಾತ್ರ ಮೀಸ ಲಾಗಿತ್ತು. ಅನಂತರ ಎರಡನೆಯ ಮಹಾ ಯುದ್ಧದವರೆಗೂ ದೇಶಾದ್ಯಂತ ಅಲ್ಲಲ್ಲಿ ಕೆಲವು ಶಾಲೆಗಳು ಆರಂಭ ವಾದವು. 1920ರಲ್ಲಿ ಶಿಕ್ಷಣದಲ್ಲಿ ಸುಧಾರಣೆ ಆರಂಭವಾಯಿತು. ಪ್ರಾಥಮಿಕ ಶಾಲೆಯ ಶಿಕ್ಷಣವನ್ನು ಉತ್ತಮ ಪಡಿಸುವ ಮತ್ತು ಆಗಲೆ ಆರಂಭವಾಗಿದ್ದ ಖಾಸಗಿ ಪ್ರೌಢಶಾಲೆಗಳ ಜೊತೆಗೆ ಅಖಿಮೋಟ ಎಂಬ ಹೆಸರಿನ ಉತ್ತಮ ರೀತಿಯ ಸರ್ಕಾರಿ ಪ್ರೌಢಶಾಲೆಗಳನ್ನು ಆರಂಭಿಸುವ ಯತ್ನ ನಡೆಯಿತು. 1945ರ ವೇಳೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು 1,43,000 ವಿದ್ಯಾರ್ಥಿಗಳಿದ್ದರು. ಆಗಲೂ ಒಳನಾಡಿನಲ್ಲೂ ಉತ್ತರದ ಪ್ರದೇಶದಲ್ಲೂ ಶಿಕ್ಷಣಸೌಲಭ್ಯ ಅಷ್ಟಾಗಿ ವಿಸ್ತರಿಸಿರಲಿಲ್ಲ. 1948ರಲ್ಲಿ ತೀರ ಪ್ರದೇಶದ ಅಕ್ರಾದಲ್ಲಿ ಆರು ವರ್ಷಗಳ ಪ್ರಾಥಮಿಕ ಶಿಕ್ಷಣ ಮುಗಿಸಿದ್ದವರ ಪ್ರಮಾಣ 18% ಆಗಿದ್ದರೂ ಒಳನಾಡಿನಲ್ಲಿ ಅದು 3.9% ರಷ್ಟು ಮಾತ್ರವಿತ್ತು. ಉತ್ತರದ ಪ್ರದೇಶದಲ್ಲಿ ಇನ್ನೂ ಕಡಿಮೆಯಿತ್ತು.
ಯುದ್ಧಾನಂತರದ ದಿನಗಳಲ್ಲಿ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸುವ ಕಾರ್ಯ ಭರದಿಂದ ಸಾಗಿತ್ತು. 1957ರಲ್ಲಿ ದಾಸ್ಯದಿಂದ ವಿಮುಕ್ತಿ ಹೊಂದಿದ ರಾಷ್ಟ್ರ ವಿಸ್ತರಣ ಕಾರ್ಯವನ್ನು ಮುಂದುವರಿಸಿ 1965ರ ವೇಳೆಗೆ ಇಡೀ ಸಹಾರದ ಕೆಳ ರಾಷ್ಟ್ರಗಳಲ್ಲೆಲ್ಲ ಹೆಚ್ಚು ಮುಂದುವರಿದ ರಾಷ್ಟ್ರವಾಯಿತು. 1960 ರ ವರೆಗೆ ಇದರ ಹಣಕಾಸಿನ ಸ್ಥಿತಿ ಉತ್ತಮವಾಗಿತ್ತಲ್ಲದೆ ಆದಾಯದ ಬಹುಭಾಗವನ್ನು ಶಿಕ್ಷಣದ ವಿಸ್ತರಣಕ್ಕಾಗಿ ವಿನಿಯೋಗಿಸಲಾಗುತ್ತಿತ್ತು. ಕಾಲಕ್ರಮೇಣ ಹಣಕಾಸಿನ ಸ್ಥಿತಿ ಕ್ಷೀಣಿಸಿ ಈಗ ಆದಾಯದ 1/5 ಭಾಗದಷ್ಟು ಮಾತ್ರ ಶಿಕ್ಷಣಕ್ಕೆ ಮೀಸಲಾಗುತ್ತಿದೆ.

1961 ರಿಂದ ರಾಷ್ಟ್ರಾದ್ಯಂತ ಆರು ವರ್ಷದ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದೆ. ಉಚಿತವೆಂದು ಕಾನೂನು ಮಾಡಿದ್ದರೂ ಹಣದ ಅಭಾವದಿಂದಾಗಿ ಪೋಷಕರಿಂದ ಶುಲ್ಕ ಸಂಗ್ರಹಣೆಯಂತೂ ಆಗುತ್ತಲೇ ಇದೆ. ಪ್ರಾಥಮಿಕ ಶಿಕ್ಷಣ ಮುಗಿಸಿದವರಿಗೆ ನಾಲ್ಕು ವರ್ಷದ ಅವಧಿಯ ಶಿಕ್ಷಣ ನೀಡುವ ಮಾಧ್ಯಮಿಕ ಶಾಲೆಗಳಿವೆ. ಈ ಮಾಧ್ಯಮಿಕ ಶಿಕ್ಷಣ ಮುಗಿಸಿದ ಬಹುತೇಕ ಮಂದಿ ಜೀವನೋಪಾಯಕ್ಕಾಗಿ ಯಾವುದಾದರೊಂದು ವೃತ್ತಿಯನ್ನು ಹಿಡಿಯುತ್ತಾರೆ. ಪ್ರೌಢಶಾಲೆ, ತಾಂತ್ರಿಕ ಶಾಲೆ ಅಥವಾ ಅಧ್ಯಾಪಕರ ಕಾಲೇಜಿಗೆ ಹೋಗುವವರು ಎಲ್ಲೋ ಕೆಲ ಮಂದಿ ಮಾತ್ರ. ಈ ಮಟ್ಟದ ಶಿಕ್ಷಣವೂ ಹೆಸರಿಗೆ ಮಾತ್ರ ಉಚಿತ ಮತ್ತು ಕಡ್ಡಾಯ. 15% ರಷ್ಟು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಪಶ್ಚಿಮ ಆಫ್ರಿಕ ಪರೀಕ್ಷಾ ಮಂಡಲಿ ನಡೆಸುವ ಸಾರ್ವತ್ರಿಕ ಪರೀಕ್ಷೆಗೆ ಕುಳಿತು, ಅದರಲ್ಲಿ ಉತ್ತೀರ್ಣರಾದವರು ಮಾತ್ರ ಪ್ರೌಢಶಾಲೆಗೆ ಸೇರುತ್ತಾರೆ. ಇದರ ಫಲವಾಗಿ ಅವರು ಮಧ್ಯದಲ್ಲೇ ಮಾಧ್ಯಮಿಕ ಶಾಲೆಯ ಶಿಕ್ಷಣವನ್ನು ತೊರೆದು ಪ್ರೌಢಶಾಲೆಗೆ ಸೇರುವ ಅವಕಾಶ ಲಭಿಸಿದೆ. ಈ ಪ್ರವೃತ್ತಿಯಿಂದ ಮಾಧ್ಯಮಿಕ ಶಾಲೆಯನ್ನು ಎರಡು ವರ್ಷದ ಶಾಲೆಯನ್ನಾಗಿ ಮಾಡುವ ಇಲ್ಲವೆ, ಪ್ರಾಥಮಿಕ ಶಾಲೆಯೊಡನೆ ಆ ಮಾಧ್ಯಮಿಕದ ಎರಡು ತರಗತಿಗಳನ್ನು ಸೇರಿಸಿಬಿಡುವ ಯತ್ನ ನಡೆಯುತ್ತಿದೆ. ಪ್ರೌಢಶಾಲೆಯ ಐದು ವರ್ಷದ ಶಿಕ್ಷಣದ ಅನಂತರ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೆಲವು ಪ್ರೌಢಶಾಲೆಯಲ್ಲೇ ಇರುವ 6ನೆಯ ತರಗತಿಯ ಎರಡು ವರ್ಷದ ಶಿಕ್ಷಣವನ್ನು ಕೈಕೊಂಡು ಆ ಬಳಿಕ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಹೋಗಲು ಯತ್ನಿಸುವರು. ಆದರೆ ಪ್ರೌಢಶಾಲೆಯ ಬಹುಮಂದಿ ಐದನೆಯ ತರಗತಿಗೇ ತಮ್ಮ ಶಿಕ್ಷಣವನ್ನು ಮುಗಿಸುವರು. 

2007ರಲ್ಲಿ ವಯಸ್ಕ ಸಾಕ್ಷರತೆ ಶೇ. 65 ರಷ್ಟಿತು; ಅದರಲ್ಲಿ ಗಂಡಸರು ಶೇ. 71.7, ಮತ್ತು ಹೆಂಗಸರು, 58 3, ಈಗ ಘಾನದಲ್ಲಿ 21,530 ಪ್ರಾಥಮಿಕ ಶಾಲೆಗಳು, 8850 ಜೂನಿಯರ್ ಸೆಕೆಂಡರಿ ಶಾಲೆಗಳು, 900 ಸೀನಿಯರ್ ಸೆಕೆಂಡರಿ ಶಾಲೆಗಳು, 52 ಸಾರ್ವಜನಿಕ ಶಿಕ್ಷಣ ಕಾಲೇಜುಗಳು, 5 ಖಾಸಗಿ ಶಿಕ್ಷಣ ಕಾಲೇಜುಗಳು, 5 ಪಾಲಿಟೆಕ್ನಿಕ್ ಸಂಸ್ಥೆಗಳು, 8 ವಿಶ್ವವಿದ್ಯಾನಿಲಯಗಳು ಇವೆ. ಶಿಕ್ಷಣ ಮಾಧ್ಯಮ ಇಂಗ್ಲಿಷ್. 

ಅಧ್ಯಾಪಕರ ಶಿಕ್ಷಣ : ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಅಧ್ಯಾಪಕರ ಶಿಕ್ಷಣದ ಕಾಲೇಜುಗಳಲ್ಲಿ ಐದು ವರ್ಷಗಳ ಶಿಕ್ಷಣ ಪಡೆದು (‘ಎ’ ಸರ್ಟಿಫಿಕೇಟ್) ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಅಧ್ಯಾಪಕರಾಗುವರು. ಪ್ರೌಢಶಾಲೆಯ ವಿದ್ಯಾರ್ಥಿಗಳೂ ಅಲ್ಲಿ ಶಿಕ್ಷಣಕ್ಕೆ ಸೇರಲವಕಾಶವಿದೆ. ಆದರೆ ಅವರು ಎರಡೇ ವರ್ಷಗಳಲ್ಲಿ ಶಿಕ್ಷಣ ಮುಗಿಸಿಕೊಳ್ಳಬೇಕಾಗುತ್ತದೆ. ಸಂಗೀತ, ದೈಹಿಕ ಶಿಕ್ಷಣ, ಕುಶಲಕಲೆ, ಮನೆವಾರ್ತೆ, ಲೆಕ್ಕ, ಮುಂತಾದ ಪಾಠಗಳನ್ನು ಬೋಧಿಸುವ ಅಧ್ಯಾಪಕರಿಗೂ ಅಲ್ಲಿ ಶಿಕ್ಷಣವೀಯಲಾಗುವುದು. 

ತಾಂತ್ರಿಕ ಶಿಕ್ಷಣ : ಪ್ರಾಥಮಿಕ ಶಿಕ್ಷಣ ಮುಗಿಸಿದವರಿಗೆ ತಾಂತ್ರಿಕ ಶಾಲೆಗಳು ವರ್ಣಕಲೆ, ಕಟ್ಟಡದ ಕೆಲಸ, ಯಂತ್ರಶಿಲ್ಪ, ವಿದ್ಯುತ್ತಿನ ತಂತಿ ಜೋಡಿಸುವ ಕೆಲಸ, ವಾಣಿಜ್ಯ ವ್ಯವಹಾರಗಳ ವಿದ್ಯೆ, ಗೃಹಾಲಂಕಾರ, ಗೃಹವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಎರಡು ವರ್ಷದ ಅವಧಿಯ ತರಬೇತು ನೀಡುವುವು. ಕೆಲವು ಪ್ರಾಥಮಿಕ ಶಾಲೆಗಳಲ್ಲೂ ತಾಂತ್ರಿಕ ಶಿಕ್ಷಣದ ವ್ಯವಸ್ಥೆ ಉಂಟು. ಆದರೆ ಕ್ರಮಬದ್ಧ ತಾಂತ್ರಿಕ ಶಿಕ್ಷಣ ಇದಕ್ಕೆಂದೇ ಇರುವ ತಾಂತ್ರಿಕ ಶಿಕ್ಷಣ ಇನ್ಸ್ಟಿಟ್ಯೂಟುಗಳಲ್ಲಿ ದೊರಕುತ್ತದೆ. ಮಾಧ್ಯಮಿಕ ಶಿಕ್ಷಣ ಮುಗಿಸಿದವರು ಇಲ್ಲಿ ವರ್ಣಕಲೆ, ಗೃಹಾಲಂಕಾರ, ಮರಗೆಲಸ, ಕಟ್ಟಡದ ಕೆಲಸ, ಎಂಜಿನಿಯರಿಂಗ್ , ವಾಣಿಜ್ಯ ವಿದ್ಯೆ ಮುಂತಾದವುಗಳಲ್ಲಿ ಎರಡು ವರ್ಷಗಳ ಅವಧಿಯ ತಾಂತ್ರಿಕ-ಪುರ್ವದ ಶಿಕ್ಷಣ ಪಡೆಯುವರು. ಇಲ್ಲಿನ ಶಿಕ್ಷಣ ಮುಗಿಸಿದವರು ಪಾಲಿಟೆಕ್ನಿಕ್ಕುಗಳಲ್ಲಿ ಸೇರಿ ತಮ್ಮ ಆಯ್ದ ವೃತ್ತಿಯಲ್ಲಿ ಹೆಚ್ಚಿನ ಶಿಕ್ಷಣ ಪಡೆಯುವುದಕ್ಕೆ ಅವಕಾಶವಿದೆ. ಇವುಗಳ ಜೊತೆಗೆ ಎರಡು ತಾಂತ್ರಿಕ ಶಿಕ್ಷಣದ ಅಧ್ಯಾಪಕರ ತರಬೇತಿ ಸಂಸ್ಥೆಗಳೂ ಗಣಿ ಕೆಲಸದಲ್ಲಿ ಶಿಕ್ಷಣವೀಯುವ ಟಾಕರ್ವ್ ಮೈನಿಂಗ್ ಪಾಠಶಾಲೆಯೂ ಇವೆ. ಚಿತ್ರ (ರಸ್ತೆಯಂಚಿನ ಮಾರಾಟದ ಅಂಗಡಿಗಳು ಘಾನದಲ್ಲಿ ಸಾಮಾನ್ಯ).

ಶಿಕ್ಷಣದ ಆಡಳಿತ : ರಾಷ್ಟ್ರದ ಶಿಕ್ಷಣ, ಶಿಕ್ಷಣ ಸಚಿವರ ನೇರ ಆಡಳಿತಕ್ಕೊಳಪಟ್ಟಿದೆ. ವಿಶ್ವವಿದ್ಯಾಲಯದ ಪುರ್ವದ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತ ಮತ್ತು ಅವುಗಳ ಮೇಲ್ವಿಚಾರಣೆಗಾಗಿ ಸಚಿವಾಲಯ ಎರಡು ವಿಭಾಗಗಳಾಗಿ ವ್ಯವಸ್ಥೆಗೊಂಡಿದೆ. ಬಹುತೇಕ ಶಾಲೆಗಳನ್ನು ಸ್ಥಳೀಯ ಸರ್ಕಾರದ ಸಂಸ್ಥೆಗಳೂ ಇಲ್ಲವೆ ಧಾರ್ಮಿಕ ಸಂಸ್ಥೆಗಳೂ ನಡೆಸುತ್ತಿವೆ. ಅವಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಅನುದಾನ ಪಡೆಯುವ ಈ ಶಾಲೆಗಳು ಸಾರ್ವಜನಿಕ (ಸರ್ಕಾರದ) ಶಾಲೆಗಳೆಂದೇ ಪರಿಗಣನೆಯುಂಟು. ಅನುದಾನವನ್ನು ಪಡೆಯದ ಅನೇಕ ಖಾಸಗಿ ಪ್ರೌಢಶಾಲೆಗಳೂ ಅಸ್ತಿತ್ವದಲ್ಲಿವೆ.	
	(ಎನ್. ಎಸ್. ವಿ.)

ಆರ್ಥಿಕತೆ: ಘಾನದ ಮುಖ್ಯ ಕಸಬು ವ್ಯವಸಾಯ. ಸವಾನ ಹುಲ್ಲುಗಾಡುಗಳಲ್ಲದೆ ಶೇ.22% ಭೂಮಿ ವ್ಯವಸಾಯ ಯೋಗ್ಯವಾದ್ದು, ಶೇ.17% ಅರಣ್ಯ ಪ್ರದೇಶ. ಘಾನದಲ್ಲಿ ಶೇಕಡ ಐವತ್ತು ಮಂದಿ ರೈತರು. ಶೇ.15% ಮಂದಿ ಮಾತ್ರ ಉದ್ಯಮಗಳಲ್ಲಿ ನಿರತರಾಗಿದ್ದಾರೆ. ಕೋಕೋ ಮುಖ್ಯ ಬೆಳೆ. 1970ರಲ್ಲಿ 345 ಟನ್ ಕೋಕೋ ಬೆಳೆಯಾಯಿತು. ಈ ದೇಶದ ಇತರ ಬೆಳೆಗಳು ಬತ್ತ, ತೆಂಗು, ನೆಲಗಡಲೆ, ಕಾಫಿ, ರಬ್ಬರ್, ಮರಗೆಣಸು, ಜಂಬೀರ ಫಲಗಳು. ಅನಾನಾಸ್ ಘಾನ ಮತ್ಸ್ಯೋದ್ಯಮ ಕಾರ್ಪೋರೇಷನ್ ಮೀನುಗಾರಿಕೆಯ ಅಭಿವೃದ್ಧಿಗೆ ಗಮನ ನೀಡುತ್ತಿದೆ.
ಘಾನದ ಅರಣ್ಯಗಳು ಹೆಚ್ಚಾಗಿ ದಕ್ಷಿಣದಲ್ಲಿವೆ. ಅವುಗಳ ಒಟ್ಟು ವಿಸ್ತೀರ್ಣ 31,760 ಚ.ಮೈ. ವ್ಯವಸಾಯಕ್ಕಾಗಿ ಮರಗಳನ್ನು ಕಡಿಯಬೇಕಾಗಿದ್ದರೂ ಮೀಸಲು ಅರಣ್ಯಗಳಲ್ಲಿ ಮರಗಳನ್ನು ರಕ್ಷಿಸಲಾಗಿದೆ. ಮರಗಳನ್ನು ಪ್ಲೈವುಡ್ ಕಾರ್ಖಾನೆಗಳಲ್ಲಿ ಬಳಸ ಲಾಗುತ್ತಿರುವುದರಿಂದ ದಿಮ್ಮಿಗಳು ರಫ್ತಾಗುವುದು ಕಡಿಮೆ.

ಘಾನದಲ್ಲಿ ಚಿನ್ನ ಹೆಚ್ಚಾಗಿ ಸಿಗುತ್ತದೆ. 1968 ರಲ್ಲಿ 22,000 ಕಿ.ಗ್ರಾಂ. ಚಿನ್ನವನ್ನು ಉತ್ಪಾದಿಸಲಾಯಿತು. ಮ್ಯಾಂಗನೀಸ್, ಬಾಕ್ಸೈಟ್ ಮತ್ತು ವಜ್ರಗಳೂ ಸಿಗುತ್ತವೆ. 1987ರಲ್ಲಿ 327,000 ಔನ್ಸುಗಳಷ್ಟಿದ್ದ ಸುವರ್ಣೋತ್ಪಾದನೆ 1992ರಲ್ಲಿ ಒಂದು ಮಿಲಿಯನ್ ಔನ್ಸುಗಳಿಗೇರಿತು.
ಘಾನದ ಮುಖ್ಯ ಆಮದುಗಳು: ಯಂತ್ರೋಪಕರಣ, ರಾಸಾಯನಿಕ ವಸ್ತುಗಳು, ಹೊಗೆಸೊಪ್ಪು. ರಫ್ತುಗಳು: ಕೋಕೋ, ಅರಣ್ಯೋತ್ಪಾದನಗಳು, ಚಿನ್ನ, ವಜ್ರ, ಮ್ಯಾಂಗನೀಸ್ ಮತ್ತು ಬಾಕ್ಸೈಟ್.
ಘಾನದ ನಾಣ್ಯ ಸೀಡಿ (ನೂರು ಪೆಸವಾಗಳು).

ಸಾರಿಗೆ, ಸಂಪರ್ಕ : ಪ್ರಯಾಣಿಕರ ಸಂಚಾರ ಮತ್ತು ಸರಕುಗಳ ಸಾಗಣೆಗೆ ರೈಲು ಮುಖ್ಯ ಸಾಧನ. 1997 ರಲ್ಲಿ 735 ಕಿ.ಮೀ. ದೂರದಷ್ಟು ರೈಲು ರಸ್ತೆಗಳಿದ್ದವು. ಅಕ್ರಾ, ಕೂಮಾಸಿ ಮತ್ತು ಟಾಕೊರಾಡಿ ನಗರಗಳಿಗೆ ರೈಲ್ವೆ ಸಂಪರ್ಕವಿದೆ.
ಘಾನದಲ್ಲಿ 40,186 ಕಿಮೀ ಗಳಷ್ಟು ರಸ್ತೆಗಳಿವೆ. ಸಮುದ್ರದ ಅಂಚಿನಲ್ಲಿ ಸ್ವಾಭಾವಿಕ ರೇವುಗಳಿಲ್ಲ. ಸೆಕಂಡೀ-ಟಾಕೊರಾಡಿ ಒಂದು ಕೃತಕ ಬಂದರು. 1920ರಲ್ಲಿ ನಿರ್ಮಿತವಾದ ಈ ಬಂದರನ್ನು ಎರಡನೆಯ ಮಹಾಯುದ್ಧದ ಕಾಲದಲ್ಲಿ ವಿಸ್ತರಿಸಲಾಯಿತು. 1962ರಲ್ಲಿ ತೆರೆಯಲಾದ ಕೃತಕ ಬಂದರು ಟೆಮ. ಘಾನದಿಂದ ಆಫ್ರಿಕದ ಪ್ರಮುಖ ಪಟ್ಟಣಗಳಿಗೆ ಮತ್ತು ಲಂಡನ್ ನಗರಕ್ಕೆ ವಿಮಾನ ಸೌಲಭ್ಯವಿದೆ.

ಘಾನದ ಮುಖ್ಯ ಪಟ್ಟಣಗಳು ಮತ್ತು ಅವುಗಳ ಜನಸಂಖ್ಯೆಗಳನ್ನು ಮುಂದೆ ಕೊಟ್ಟಿದೆ: ಅಕ್ರಾ (2,291,352), ಕೂಮಾಸಿ (1,989,062), ಸೆಕಂಡೀ (144,570), ಟಮಾಲ (537,986), ಕೇಪ್ ಕೋಸ್ಟ್ (217,032), ಟಾಕೊರಾಡಿ (260,635) ಮತ್ತು ಟೆಮ (160,939).
ಘಾನದಲ್ಲಿ 5 ಬಿಲಿಯನ್ ಬ್ಯಾರಲ್ಗಳಷ್ಟು ತೈಲನಿಕ್ಷೇಪವಿದೆಯೆಂದು ನಂಬಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವೂ ತೀವ್ರವಾಗಿ ಬೆಳೆಯುತ್ತಿದ್ದು ಐರೋಪ್ಯರು, ಅಮೆಕನ್ನರು, ಮತ್ತಿತರÀ ರಾಷ್ಟ್ರಗಳವರು ಇಲ್ಲಿಗೆ ಪ್ರವಾಸದಮೇಲೆ ಬರುತ್ತಾರೆ.	(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ